ಮೈಸೂರು, ಏ. ೨೯ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆ, ತಿಲಕ್ ನಗರ, ಮೈಸೂರು ಈ ಸಂಸ್ಥೆಯು ಕರ್ನಾಟಕ ರಾಜ್ಯ ಸರ್ಕಾರದ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ ಕಿವುಡ ಬಾಲಕರಿಗೆ ಉಚಿತ ವಸತಿಯುತ ಹಾಗೂ ಬಾಲಕಿಯರಿಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಉಚಿತವಾಗಿ ಒಂದನೇ ತರಗತಿಯಿಂದ ೧೦ನೇ ತರಗತಿಯವರೆಗೆ ಬೋಧನಾ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಈ ಶಾಲೆಗೆ ೨೦೧೦-೧೧ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ೬ ರಿಂದ ೧೦ ವರ್ಷದೊಳಗಿನ ಕಿವುಡ ಬಾಲಕ ಬಾಲಕಿಯರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕಿವುಡ ಮಕ್ಕಳು ಬಯಸಿದಲ್ಲಿ ಅವರನ್ನು ಸಹ ದಾಖಲು ಮಾಡಿಕೊಳ್ಳಲಾಗುವುದು.
ಶೈಕ್ಷಣಿಕ ಅವಧಿಯಲ್ಲಿ ಕಿವುಡ ಬಾಲಕರಿಗೆ ಉಚಿತ ಊಟ, ವಸತಿ, ಹಾಸಿಗೆ, ಹೊದಿಕೆ, ಪಠ್ಯಪುಸ್ತಕಗಳು ಹಾಗೂ ವೈದ್ಯಕೀಯ ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು. ಒಂದನೇ ತರಗತಿಯಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಬೋಧನಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಕಿವುಡ ಬಾಲಕರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಯಾವುದೇ ರೀತಿಯ ಶುಲ್ಕವನ್ನು ಪಾವತಿ ಮಾಡಬೇಕಾಗಿರುವುದಿಲ್ಲ.
ಸದರಿ ಶಾಲೆಗೆ ಕಿವುಡ ಬಾಲಕ ಬಾಲಕಿಯರನ್ನು ಸೇರಿಸಲು ಇಚ್ಚಿಸುವ ತಂದೆ / ತಾಯಿ / ಪೋಷಕರು ಪ್ರವೇಶದ ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ದಿನಾಂಕ ೦೨.೦೫.೨೦೧೦ ರಿಂದ ೩೧.೦೫.೨೦೧೦ರವರೆಗೆ ಪಡೆದು ಈ ಕೆಳಕಂಡ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿರುತ್ತದೆ.
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಮೈಸೂರು ಅಥವಾ ನಿಮ್ಹಾನ್ಸ್, ಬೆಂಗಳೂರು ಸಂಸ್ಥೆಯಿಂದ ಪಡೆದ ವಾಕ್ ಶ್ರವಣ ದೋಷ ದೃಢೀಕರಣ ಪತ್ರ, ಪಾಸ್ಪೋರ್ಟ್ ಅಳತೆಯ ಮೂರು ಭಾವಚಿತ್ರಗಳು, ಜನ್ಮ ದಿನಾಂಕದ ದೃಢೀಕರಣ ಪತ್ರ (ವರ್ಗಾವಣೆ ಪ್ರಮಾಣ ಪತ್ರ ಇದ್ದಲ್ಲಿ ಅವಶ್ಯಕತೆಯಿರುವುದಿಲ್ಲ), ಬೇರೆ ಶಾಲೆ / ಸಂಸ್ಥೆಯಿಂದ ಪ್ರವೇಶ ಬಯಸಿ ಬಂದಲ್ಲಿ ಶಾಲಾ ವರ್ಗಾವಣೆ ಪ್ರಮಾಣ ಪತ್ರ.
ಹೆಚ್ಚಿನ ಮಾಹಿತಿಗಾಗಿ ಅಧೀಕ್ಷಕರು, ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆ, ತಿಲಕ್ ನಗರ, ಮೈಸೂರು ಅವರನ್ನು ಕಚೇರಿ ಕೆಲಸದ ದಿನಗಳಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ ೦೮೨೧ - ೨೪೯೪೧೦೪ನ್ನು ಸಂಪರ್ಕಿಸಬಹುದಾಗಿರುತ್ತದೆ.